ಕ್ವೇಕರ್ ಚಳವಳಿ

ಹದಿನೇಳನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಜನ್ಮ ತಳೆದು, ಜಗತ್ತಿನ ಅನೇಕ ಭಾಗಗಳಲ್ಲಿ ಸುಮಾರಾಗಿ ಸದಸ್ಯರನ್ನು ಹೊಂದಿರುವ ಕ್ರೈಸ್ತ ಮಿತ್ರ ಸಮಾಜವೊಂದರ ಧಾರ್ಮಿಕ ಚಳುವಳಿ, ಜಾರ್ಜ್ ಫಾಕ್ಸ್ (1624-91) ಇದರ ಸ್ಥಾಪಕ. ಮಿತ್ರ ಸಮಾಜದ ಸದಸ್ಯನನ್ನು ಕ್ವೇಕರ್ (ಸ್ನೇಹಿತ) ಎಂದು ಕರೆಯುತ್ತಾರಾದರೂ ಸಮಾಜದವರಾರೂ ಆ ಹೆಸರನ್ನು ತಮ್ಮ ಸದಸ್ಯರಿಗೆ ಬಳಸುವುದಿಲ್ಲ. ಬಹುಶಃ ಅದು ಬೇರೆಯವರು ಇಟ್ಟ ಹೆಸರಿರಬೇಕು. ಕ್ವೇಕರರ ನಂಬಿಕೆಯ ಪ್ರಕಾರ ದೈವಾನುಗ್ರಹ ಎಲ್ಲ ಸ್ತ್ರೀಪುರುಷರ ಮೇಲೂ ಇದ್ದು, ಪ್ರತಿಯೊಬ್ಬ ವ್ಯಕ್ತಿಯ ವೈಶಿಷ್ಟಕ್ಕೆ ಕಾರಣವಾಗಿರುತ್ತದೆ. ಅವರವರ ನಂಬಿಕೆಗೆ ತಕ್ಕಂತೆ ಅನುಗ್ರಹವೂ ಪರಿಮಾಣದಲ್ಲಿ ವ್ಯತ್ಯಾಸ ಹೊಂದುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬನ ವ್ಯಕ್ತಿತ್ವವೂ ಪವಿತ್ರ ಮತ್ತು ಪೂಜನೀಯ ಆಗಿರುತ್ತದೆ. ಪ್ರತಿಯೊಬ್ಬನೂ ತನ್ನ ಹೃದಯಮಂದಿರದಲ್ಲಿ ಪರಮಾತ್ಮನ ಪ್ರಕಾಶವನ್ನು ಕಂಡುಕೊಳ್ಳುವುದರಲ್ಲಿ ತನ್ನ ಹಿರಿಮೆಯನ್ನು ಗಳಿಸಿಕೊಳ್ಳುತ್ತಾನೆ. ಕ್ರಿಸ್ತನ ಕರುಣೆಯ ಬೆಳಕೇ ದೈವಜ್ಯೋತಿಯ ಅಸ್ತಿತ್ವಲಾಭ ಕ್ರೈಸ್ತೇತರಲ್ಲೂ ಇರುತ್ತದೆಂದೂ ಅವರು ಭಾವಿಸುತ್ತಾರೆ.

ಸಾಮಾನ್ಯವಾಗಿ, ಈ ಮಿತ್ರಸಂಘದ ಸದಸ್ಯರಿಗೆ ಯಾವುದೇ ರೀತಿಯ ಸಾಂಘಿಕ ನಿಯಾಮಾವಳಿಯೂ ಕಡ್ಡಾಯವಾಗಿ ಅನ್ವಯಿಸುವುದಿಲ್ಲ. ಆದರೂ 1887ರಲ್ಲಿ ಪ್ರಕಟಗೊಂಡ ರಿಚ್ಮಂಡನ ಶ್ರದ್ಧಾ ಘೋಷಣೆಯನ್ನು ತಾವಾಗಿಯೇ ತಮ್ಮ ವಾರ್ಷಿಕ ಸಭೆಗಳಲ್ಲಿ ಅಂಗೀಕರಿಸಿರುವುದನ್ನು ಕಾಣಬಹುದು. ಯಾವ ವಿಶಿಷ್ಟಮತೀಯ ಆಚಾರಕ್ಕೂ ಕಟ್ಟುಬೀಳದೆ ಕ್ರೈಸ್ತಾನುಭವದ ಹಿನ್ನೆಲೆಯಲ್ಲಿ ಜ್ಞಾನಜ್ಯೋತಿ ಸಾಕ್ಷಾತ್ಕಾರಕ್ಕೆ ಯತ್ನಿಸಿದವರೆಲ್ಲ ಈ ಪಂಥದ ಸದಸ್ಯವರ್ಗಕ್ಕೆ ಸೇರಬಹುದಾಗಿದೆ.

ಪ್ರತಿಯೊಬ್ಬನಿಗೂ ದೇವರು ಎಂದಾದರೊಮ್ಮೆ ಪ್ರತ್ಯಕ್ಷನಾಗಿ ಕಾಣಿಸಿಕೊಳ್ಳುತ್ತಾನೆ ಹಾಗೂ ಅವನೊಡನೆ ಸಂಭಾಷಿಸುತ್ತಾನೆ ಎಂದು ಇವರ ನಂಬಿಕೆ. ಆದ್ದರಿಂದ ಈ ಪಂಥದವರು ಪೂರ್ವಭಾವಿಕಾರ್ಮಕ್ರಮವಿಲ್ಲದೆ ಸಭೆ ಸೇರುತ್ತಾರೆ; ಮೌನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆಗ, ಆತ್ಮಪ್ರೇರಣೆಯಿಂದ, ಯಾರಾದರೊಬ್ಬರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾರೆ. ಇಲ್ಲವೆ ಪ್ರಾರ್ಥನೆ ಸಲ್ಲಿಸುತ್ತಾರೆ. ಒಮ್ಮೊಮ್ಮೆ ಸ್ವಯಂಸ್ಫೂರ್ತಿಯಿಂದ ಬೈಬಲ್ ವಾಚನವೂ ಆಗುವುದುಂಟು.
ಕ್ವೇಕರರು ಮದ್ಯಾದಿ ಪಾನೀಯಗಳಿಂದ ದೂರವಾಗಿ, ಭಗವಂತನ ಚಿಜ್ಜ್ಯೋತಿಯಲ್ಲಿ ಶ್ರದ್ಧೆ ನಂಬಿಕೆಗಳನ್ನು ಇಟ್ಟುಕೊಂಡಿದ್ದರೂ ಹಲವಾರು ರಾಜಕೀಯ ಕಾರಣಗಳಿಗಾಗಿ ಕೆಲವು ಮತೀಯ ವಿಧಾನಗಳನ್ನು ರೂಪಿಸಿಕೊಳ್ಳಬೇಕಾಯಿತು. ಇಡೀ ಮಾನವಜೀವಿತವನ್ನೇ ಪರಮ ಪವಿತ್ರವೆಂದು ನಂಬಿದ್ದರಿಂದ, ಕೆಲವು ಮಾತ್ರ ಪರಮ ಪವಿತ್ರವೆಂದು ಹೇಳಲು ಇವರು ಪ್ರಯತ್ನಿಸಲಿಲ್ಲ. ಆದಕಾರಣ ಪ್ರತ್ಯೇಕವಾಗಿ ಕ್ರಿಸ್ಮಸ್ ಆಚರಿಸುವುದಕ್ಕಾಗಲಿ ಭಾನುವಾರಕ್ಕೆ ವಿಶೇಷ ಮಹತ್ತ್ವ ನೀಡುವುದಕ್ಕಾಗಲಿ ಈ ವರ್ಗದವರು ಇಚ್ಛಿಸಲಿಲ್ಲ. ಪ್ರತಿದಿನವೂ ಪವಿತ್ರವೆಂದೂ ಪ್ರತಿಯೊಬ್ಬರಲ್ಲೂ ದೇವನಿದ್ದಾನೆಂದೂ ಇವರ ಮತ.

ಹೀಗೆ, ಸರ್ವವ್ಯಾಪಿ ಜೀವಜ್ಯೋತಿ ಪರಮಾತ್ಮ ತತ್ತ್ವ ಅನುಸರಣೆಯ ಫಲವಾಗಿ ಧಾರ್ಮಿಕ ರಂಗದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಸ್ಥಾನ ದೊರೆಯುವಂತೆ ಆಯಿತು. ಮಾಸಿಕ, ವಾರ್ಷಿಕ ಸಭೆಗಳನ್ನು ಕೂಡಿಸುವ ಪರಂಪರೆ ಬೆಳೆಯಿತು. ಸ್ವಇಚ್ಛೆಯಿಂದ ಸಭೆಗೆ ಜನ ಹಾಜರಿರುತ್ತಿದ್ದರು. ಈ ಸಭೆಗಳಲ್ಲಿ ದೇವತಾರಾಧನೆ ಚರ್ಚೆ, ತೀರ್ಮಾನಗಳು ನಡೆಯುತ್ತಿದ್ದುವು.

ಈ ಪಂಥದ ಮೊದಲಿಗನಾದ ಜಾರ್ಜ್‍ಫಾಕ್ಸ್ ತನಗಾದ ಆತ್ಮಸಾಕ್ಷಾತ್ಕಾರವನ್ನು ಜನತೆಗೆ ತಿಳಿಸಲು ಪ್ರಾರಂಭಿಸಿ ದೇವರ ಕರುಣೆ ಎಲ್ಲರ ಮೇಲೂ ಇದೆಯೆಂದೂ ಪ್ರತಿಯೊಬ್ಬನೂ ಆತ್ಮಪರಿಶೋಧನೆಯಲ್ಲಿ ದೈವಾನುಗ್ರಹಕ್ಕಾಗಿ ಪ್ರಯತ್ನಿಸಬೇಕೆಂದೂ ಬೋಧಿಸಿದ. ಈ ತತ್ತ್ವಸರಣಿ ಅನೇಕರ ಮನ ಸೆಳೆಯಿತು. ಬೈಬಲ್ ಗ್ರಂಥ ದೇವರಿಂದ ಸ್ಫೂರ್ತಿಗೊಂಡು ರೂಪಿತವಾಯಿತಾದರೂ ಪ್ರತಿಯೊಬ್ಬನೂ ಅದನ್ನು ತನ್ನ ಆತ್ಮ ಜ್ಯೋತಿ ನಿದರ್ಶನಕ್ಕನುಸಾರವಾಗಿ ವ್ಯಾಖ್ಯಾನಿಸಿಕೊಂಡು ಅರಿಯಬೇಕೆಂಬ ನಂಬಿಕೆ ಪ್ರಬಲಗೊಂಡಿತು. ಆರಾಧನಾ ಸ್ವಾತಂತ್ರ್ಯ, ಪ್ರಮಾಣವಚನ ಸ್ವೀಕಾರ ಸ್ವಾತಂತ್ರ್ಯ ಇತ್ಯಾದಿ ಕಾರಣಗಳಿಂದ 17ನೆಯ ಶತಮಾನದಲ್ಲಿ ಇವರು ಅಪಾರ ಕಷ್ಟನಷ್ಟಗಳಿಗೆ ಗುರಿಯಾದರು. 18ನೆಯ ಶತಮಾನದಲ್ಲಿ ರಾಜಕೀಯ ಘರ್ಷಣೆಗೂ ಒಳಗಾದರು. ಈ ಸಂಘದವರು ಸಮಾಜಸುಧಾರಣೆಗಾಗಿ ನಡೆಸಿದ ಹೋರಾಟ ಗಮನಾರ್ಹವಾದುದು. ಅಮೆರಿಕದಲ್ಲಿ ಸಮಾಜಸುಧಾರಣೆಗಾಗಿ ನಡೆಸಿದ ಹೋರಾಟ ಗಮನಾರ್ಹವಾದುದು. ಅಮೆರಿಕದಲ್ಲಿ ಇವರು ಗುಲಾಮಗಿರಿಯ ವಿರುದ್ಧವಾಗಿ ಹೆಣಗಿದರಲ್ಲದೆ ಮತಿವಿಕಲರ ಸೇವೆಗಾಗಿ ಶುಶ್ರೂಷಾಲಯಗಳನ್ನು ತೆರೆದರು. ಹೃದ್ಗತ ಭಗವಂತನ ಜ್ಯೋತಿಯನ್ನು ಎಲ್ಲರೂ ಕಂಡುಕೊಳ್ಳಲು ನೆರವಾಗುವಂತೆ ಪ್ರೇರೇಪಿಸುವುದೇ ಇವರ ಆಶಯವಾಯಿತು. ಕಾಲಕ್ರಮೇಣ, ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಈ ಚಳವಳಿಯ ವಿವಿಧ ಸೇವಾಪಂಥಗಳು ರೂಪುಗೊಂಡು ಕಾರ್ಮಿಕ ಕಲ್ಯಾಣ, ಸ್ತ್ರೀ ವಿದ್ಯಾಭ್ಯಾಸ, ಶಿಕ್ಷಣ ವ್ಯವಸ್ಥೆ ಮೊದಲಾದ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸತೊಡಗಿದುವು. ವಿಜ್ಞಾನ ಬೋಧನೆಗೂ ಪ್ರೋತ್ಸಾಹ ನೀಡಲಾಯಿತು. 20ನೆಯ ಶತಮಾನದಲ್ಲಿ ಕಲಾ ಕ್ಷೇತ್ರದಲ್ಲೂ ಇವರ ಪ್ರಭಾವ ಹೆಚ್ಚಿತು. ಜಗತ್ತಿನ ನಾನಾ ಕಡೆ-ಭಾರತ, ಚೀನ, ಪೂರ್ವ ಆಫ್ರಿಕ, ಅಲಾಸ್ಕ, ಆಸ್ಟ್ರೇಲಿಯ, ನ್ಯೂಜೀóಲೆಂಡ್-ಮೊದಲಾದ ಕಡೆಗಳಲ್ಲೆಲ್ಲ ಇವರ ಶಾಖೆಗಳು ಸ್ಥಾಪಿತವಾದುವು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜನತೆಗೆ ನೆರವು ನೀಡುವ ಪರಿಹಾರ ಕಾರ್ಯದಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿತು. ಅಂತರರಾಷ್ಟ್ರೀಯ ಸಮ್ಮೇಳನ ಸೇರಿ ಪರಸ್ಪರ ಬಾಂಧವ್ಯವನ್ನು ಹೆಚ್ಚಿಸಿಕೊಂಡು, ವ್ಯಾಪಕವಾದ ಕಾರ್ಯಕ್ರಮಗಳ ಮೂಲಕ, ಇಂದು ಕ್ವೇಕರ್ ಚಳವಳಿ ವಿಶ್ವವ್ಯಾಪಿಯಾಗಿದೆ. 1952ರ ಅಂತರರಾಷ್ಟ್ರೀಯ ಕ್ವೇಕರರ ಮಹಾಧಿವೇಶನದ ವೇಳೆಗೆ ಈ ಪಂಥದ ಸದಸ್ಯರ ಅಂದಾಜಿನ ಅಂಕಿಅಂಶ ಹೀಗಿತ್ತು: ಆಫ್ರಿಕ-24,000, ಅಮೆರಿಕ-1,24,000, ಏಷ್ಯ-1,000 ಆಸ್ಟ್ರೇಲಿಯ ಮತ್ತು ನ್ಯೂಜೀóಲೆಂಡ್-1,000, ಯೂರೋಪ್-24,000.  				     				(ಎಚ್.ಆರ್.ಡಿ.)